ಅಪರ ಮುಖ್ಯ ಕಾರ್ಯದರ್ಶಿಗಳಿಂದ,

ನಿರುದ್ಯೋಗ ಎಂಬ ಪಿಡುಗು ದೇಶದ ಪ್ರಧಾನ ಸಮಸ್ಯೆಯಾಗಿದ್ದು, ಇದನ್ನು ಬಗೆಹರಿಸುವುದು ಕರ್ನಾಟಕ ರಾಜ್ಯ ಸರ್ಕಾರದ ಪ್ರಮುಖ ಉದ್ದೇಶವಾಗಿರುತ್ತದೆ. ನಮ್ಮ ಯುವ ಜನರು ಉತ್ತಮ ಶಿಕ್ಷಣ ಹೊಂದಿದ್ದು, ಅಗತ್ಯ ನೈಪುಣ್ಯತೆಗಳ ಕೊರತೆಯಿಂದ ಸೂಕ್ತ ಉದ್ಯೋಗವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಅಗತ್ಯ ನೈಪುಣ್ಯತೆಗಳನ್ನು ಯುವ ಜನತೆಗೆ ಒದಗಿಸಿಕೊಡಲು ಅನೇಕ ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳು ಹಲವಾರು ಕೌಶಲ್ಯ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇವೆಲ್ಲವೂ ಅಸಂಗತ ಮಾದರಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಅವುಗಳಿಂದ ಬಹತೇಕ ಯುವಜನರಿಗೆ ತಮ್ಮ ನಿರೀಕ್ಷಿತ ಮಟ್ಟದಲ್ಲಿ ಸೂಕ್ತ ಉದ್ಯೋಗ ಪಡೆದುಕೊಳ್ಳಲು ಅಥವಾ ಸಬಲೀಕರಣ ಹೊಂದಲು ಸಾಧ್ಯವಾಗಿರುವುದಿಲ್ಲ. ಆದುದರಿಂದ ರಾಜ್ಯದ ವಿವಿಧ ಇಲಾಖೆಗಳ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಒಂದೆಡೆ ತರುವ ಮೂಲಕ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯನ್ನು ಸ್ಥಾಪಿಸಲಾಗಿದೆ. ಸದರಿ ಇಲಾಖೆಯು ನೇರವಾಗಿ ಮಾನ್ಯ ಮುಖ್ಯ ಮಂತ್ರಿಗಳ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಔಪಚಾರಿಕ ಶಿಕ್ಷಣದಿಂದ ಹೊರಬರುವ ಯುವಜನತೆಯನ್ನು ಉದ್ಯೋಗಕ್ಕೆ ಅರ್ಹರನ್ನಾಗಿಸಲು ಅಥವಾ ಸ್ವಯಂ ಉದ್ಯೋಗ ಪ್ರಾರಂಭಿಸುವಂತಾಗಲು ಅವರಿಗೆ ಕೌಶಲ್ಯ ಕರ್ನಾಟಕ ಯೋಜನೆಯ ಮೂಲಕ ಕೌಶಲ್ಯ ತರಬೇತಿ ನೀಡಿ ಸ್ವಾವಲಂಬಿಗಳಾಗಿ ಬದುಕುವ ದಾರಿ ತೋರಲು ಉದ್ದೇಶಿಸಲಾಗಿದೆ.

ಕರ್ನಾಟಕವು ಮುಂದಿನ 25 ವರ್ಷಗಳವರೆಗೆ ಯುವಜನರನ್ನು ಹೊಂದಿರುವಂತಹ ರಾಜ್ಯವಾಗಿದ್ದು, ನಿರುದ್ಯೋಗ ಸಮಸ್ಯೆಯಿಂದಾಗಿ ಅವರ, ಅವರ ಕುಟುಂಬಗಳು ನಾಶವಾದರೆ ರಾಜ್ಯವೂ ಸಹ ಅವನತಿ ಹೊಂದುವುದರಲ್ಲಿ ಸಂಶಯವಿಲ್ಲ. ಕೌಶಲ್ಯ ತರಬೇತಿಯ ಮುಖಾಂತರ ಅದನ್ನು ತಪ್ಪಿಸುವಲ್ಲಿ ಇಲಾಖೆಯು ಹೊಸದಾದ ಹೆಜ್ಜೆಯನ್ನು ಸದೃಢವಾಗಿ ಇಡಲು ಮುಂದೆ ಬಂದಿದೆ. ಇದಕ್ಕೆ ಸಾರ್ವಜನಿಕರ, ಖಾಸಗಿ ಸಂಘ-ಸಂಸ್ಥೆಗಳ ಮತ್ತು ಉದ್ಯೋಗದಾತರ ಬೆಂಬಲ ಅತ್ಯವಶ್ಯಕವಾಗಿದೆ.

ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸುವ ನಮ್ಮ ಪ್ರಯತ್ನಕ್ಕೆ ತಮ್ಮೆಲ್ಲರ ಸಹಕಾರವನ್ನು ಕೋರುತ್ತೇನೆ.