ಕನ್ನಡಿಗರಾದ ನಮಗೆ ಕಾಯಕದ ಬಗ್ಗೆ ಹೊಸದಾಗಿ ವಿವರಿಸುವ ಅಗತ್ಯವಿಲ್ಲ. ಬಸವಾದಿ ಶರಣರು ‘ಕಾಯಕವೇ ಕೈಲಾಸ’ ಎಂದು ಬೋಧಿಸಿದ, ನಿರೂಪಿಸಿದ ನಾಡು ನಮ್ಮದು. ನಮ್ಮ ಸರ್ಕಾರವು ಕಾಯಕ ಶ್ರದ್ಧೆಯಲ್ಲಿ ನಂಬಿಕೆಯಿರಿಸಿರುವ, ಮಾತಿಗಿಂತ ಕೃತಿಯಲ್ಲಿ ವಿಶ್ವಾಸವಿರಿಸಿ, ನುಡಿದಂತೆ ನಡೆಯುತ್ತಿರುವ ಸರ್ಕಾರ. ಕಾಯಕದಲ್ಲಿ ಕೌಶಲ್ಯವನ್ನು ಬೆರೆಸಿ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯ ಕಡೆಗೆ ದಾಪುಗಾಲು ಇಡುತ್ತಿದೆ ನಮ್ಮ ಸರ್ಕಾರ.

ಇಂದು ಬೆಂಗಳೂರನ್ನು ಜಾಗತಿಕವಾಗಿ ‘ಅತ್ಯಂತ ಕ್ರಿಯಾಶೀಲ ನಗರ’ ಎಂದು ಗುರುತಿಸಲಾಗಿದೆ. ಈ ವಿಚಾರ ನಮ್ಮ ಯುವ ಪೀಳಿಗೆಯಲ್ಲಿ ಸ್ಫೂರ್ತಿಯನ್ನು ತುಂಬಬೇಕು. ಅದೇ ರೀತಿ, ಕರ್ನಾಟಕವು ದೇಶದಲ್ಲಿಯೇ ಸ್ಟಾರ್ಟ್ಅಪ್ ಉದ್ಯಮಗಳಲ್ಲಿ ನಂ. 1 ಆಗಿದ್ದು, ದೇಶದ ಒಟ್ಟು ಸ್ಟಾರ್ಟ್ಅಪ್ ನಲ್ಲಿ ಶೇಕಡ 30ಕ್ಕೂ ಹೆಚ್ಚು ಸ್ಟಾರ್ಟ್ಅಪ್ಗಳು ನಮ್ಮ ರಾಜ್ಯದಲ್ಲಿಯೇ ಇವೆ ಎನ್ನುವ ಅಂಶ ನಮ್ಮ ಯುವಜನತೆಯಲ್ಲಿ ಉತ್ಸಾಹವನ್ನು ತುಂಬಬೇಕು. ಹೊಸ ಆಲೋಚನೆಗಳು, ಚಿಂತನೆಗಳನ್ನು ಈ ನಾಡು ಯಾವತ್ತೂ ಪ್ರೋತ್ಸಾಹಿಸುತ್ತಾ ಬಂದಿದೆ. ರಾಜ್ಯದಲ್ಲಿ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳು ಹಾಗೂ ಎಲ್ಲಾ ಗ್ರಾಮ ಮತ್ತು ನಗರಗಳು ಕ್ರೀಯಾಶೀಲವಾಗಬೇಕೆಂಬುದು ನನ್ನ ಆಶೆ.

ಕಾರ್ಮಿಕ ಮಾರುಕಟ್ಟೆಯಲ್ಲಿ ಬದಲಾಗುತ್ತಿರುವ ತಂತ್ರಜ್ಞಾನದೊಂದಿಗೆ ಕೌಶಲ್ಯವುಳ್ಳ ಕಾರ್ಮಿಕರಿಗೆ ಹೆಚ್ಚಿನ ಬೇಡಿಕೆ ಇದೆ. ಇದರಿಂದ ಶಾಲೆಯಿಂದ ಹೊರಗುಳಿದ ಮತ್ತು ಕೌಶಲ್ಯದಿಂದ ವಂಚಿತರಾದ ಯುವಕ ಯುವತಿಯರಿಗೆ ಕೌಶಲ್ಯಗಳ ಕೊರತೆಯಿಂದಾಗಿ ಲಾಭದಾಯಕ ಉದ್ಯೋಗವನ್ನು ಪಡೆಯುವುದು ಕಷ್ಟಕರವಾಗಿದೆ. ರಾಜ್ಯ ಸರ್ಕಾರವು ಇದನ್ನು ಗಂಭೀರವಾಗಿ ಪರಿಗಣಿಸಿ 2016ರಿಂದಲೇ ಈ ಕುರಿತು ಯೋಜನೆಗಳನ್ನು ರೂಪಿಸಲು ಪ್ರಾರಂಭಿಸಿದೆ.

ರಾಜ್ಯದಲ್ಲಿ ಅನೇಕ ಕಾರ್ಯಕ್ರಮಗಳಡಿ ಸರ್ಕಾರಿ ಇಲಾಖೆಗಳು ಮತ್ತು ಖಾಸಗಿ ಏಜೆನ್ಸಿಗಳು ಕೌಶಲ್ಯ ತರಬೇತಿಯನ್ನು ನೀಡುತ್ತಿವೆ. ಆದರೆ ತರಬೇತಿ ಪಠ್ಯಕ್ರಮ, ಮೌಲ್ಯ ಮಾಪನ ಮತ್ತು ಪ್ರಮಾಣ ಪತ್ರ ನೀಡುವಿಕೆ ಇತ್ಯಾದಿ ವಿಷಯಗಳಿಗೆ ಅಧಿಕೃತ ಮುದ್ರೆ ಇಲ್ಲದಿರುವುದರಿಂದ ಈ ಪ್ರಮಾಣ ಪತ್ರಗಳಿಗೆ ಮಾನ್ಯತೆ ಇರುವುದಿಲ್ಲ. ಉದ್ಯೋಗದಾತರು ಬಯಸುವ ಕೌಶಲ್ಯಗಳಲ್ಲಿ ತರಬೇತಿ ಇಲ್ಲದೆ ಇರುವುದರಿಂದ ಯೋಗ್ಯ ಉದ್ಯೋಗಗಳು ದೊರೆಯುತ್ತಿಲ್ಲ. ತರಬೇತಿ ನಂತರ ತರಬೇತಿ ಹೊಂದಿದ ಅಭ್ಯರ್ಥಿಗಳು ಉದ್ಯೋಗ ಹೊಂದಿದ ಮತ್ತು ಮುಂದುವರೆದ ಕುರಿತು ಜಾಡು ಹಿಡಿಯುವ ಪದ್ಧತಿ ನಿಯತವಾಗಿ ಅನುಸರಿಸಲು ಆಗದ ಕಾರಣ ತರಬೇತಿ ಹೊಂದಿದ ಯುವಜನರ ಸ್ಥಿತಿಗತಿಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು, ಏಕೀಕೃತ ನಿಯಂತ್ರಣ, ಗುಣಮಟ್ಟ, ಪ್ರಮಾಣೀಕರಣ, ಪ್ರೋತ್ಸಾಹ, ಯೋಜನೆ ತಯಾರಿಕೆ, ಅನುಷ್ಠಾನ, ಉಸ್ತುವಾರಿ, ಮೌಲ್ಯಮಾಪನ, ಇತ್ಯಾದಿ ವಿಷಯಗಳ ಕುರಿತು ವ್ಯಾಪಕವಾದ ಪಾತ್ರವನ್ನು ಹೊಂದಿರುವ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯನ್ನು ಸೃಜಿಸಲಾಗಿದೆ. ವಿವಿಧ ಕೌಶಲ್ಯಗಳನ್ನು ಯುವಜನರಿಗೆ ಒದಗಿಸಿ ಅವರ ಕೈಗಳನ್ನು ಬಲ ಪಡಿಸಲು ಮುಂದಾಗಿದೆ. ಎಲ್ಲಾ ಇಲಾಖೆಗಳ ಕಾರ್ಯಕ್ರಮಗಳನ್ನು ಒಗ್ಗೂಡಿಸಿ "ಕುಶಲತೆಯ ಬೆಂಬಲ, ಯುವ ಕೈಗಳಿಗೆ ಬಲ" ಎನ್ನುವ ಘೋಷಣೆಯೊಂದಿಗೆ "ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆ"ಯನ್ನು ರೂಪಿಸಿದೆ. ಈ ಯೋಜನೆಯಡಿ ಕೈಗೊಳ್ಳಲಾಗುವ ವೃತ್ತಿ ತರಬೇತಿಗಳು, ಮಾರುಕಟ್ಟೆ ಆಧಾರಿತ ನಿಗದಿತ ಪಠ್ಯಕ್ರಮ, ಮೌಲ್ಯ ಮಾಪನ ಮತ್ತು ಪ್ರಮಾಣೀಕರಣವನ್ನು ಹೊಂದಿರುತ್ತವೆ.

ಕರ್ನಾಟಕ ಜ್ಞಾನ ಆಯೋಗವು 2030 ರವರೆಗೆ ವಿವಿಧ ವಲಯಗಳ ವೃತ್ತಿಗಳಲ್ಲಿ 1.88 ಕೋಟಿ ಯುವಜನರಿಗೆ ಕೌಶಲ್ಯ ತರಬೇತಿಯನ್ನು ನೀಡಬೇಕು ಎಂದು ಅಂದಾಜು ಮಾಡಿದೆ. . ದೊಡ್ಡ ಪ್ರಮಾಣದ ಈ ಗುರಿಯನ್ನು ತಲುಪಲು ಸರ್ಕಾರವು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

2017-18ನೇ ಸಾಲಿನಲ್ಲಿ 5 ಲಕ್ಷ ಯುವಕ-ಯುವತಿಯರಿಗೆ ಕೌಶಲ್ಯೀಕರಣ, ಮರು ಕೌಶಲ್ಯೀಕರಣ ಮತ್ತು ಉನ್ನತ ಕೌಶಲ್ಯೀಕರಣ ತರಬೇತಿಯನ್ನು ನೀಡಿ ಲಾಭದಾಯಕ ಉದ್ಯೋಗಾವಕಾಶಕಗಳನ್ನು ಕಲ್ಪಿಸಲಾಗುವುದು. ಮುಖ್ಯಮಂತ್ರಿಗಳ ಕರ್ನಾಟಕ ಜೀವನೋಪಾಯ ಯೋಜನೆಯಡಿ 50,000 ಸ್ಥಳೀಯ ಕುಶಲಕರ್ಮಿಗಳಿಗೆ ವಿಶೇಷವಾಗಿ ಮಹಿಳೆಯರಿಗೆ ಸ್ಥಳೀಯ ಕರಕುಶಲ, ಕೈಮಗ್ಗ, ಮುಂತಾದ ವಲಯಗಳನ್ನು ಉತ್ತೇಜಿಸಿ ಜೀವನೋಪಾಯ ಕಲ್ಪಿಸಲು ಕೌಶಲ್ಯ ತರಬೇತಿ, ವಿನ್ಯಾಸ ನಿರ್ಮಾಣಕ್ಕೆ ನೆರವು ಮತ್ತು ಮಾರುಕಟ್ಟೆ ಸೌಲಭ್ಯವನ್ನು “ಸ್ಥಳೀಯ ಮಟ್ಟದಿಂದ ಜಾಗತೀಕ ಮಟ್ಟದವರೆಗೆ” ಉಪಕ್ರಮದಡಿಯಲ್ಲಿ ನೀಡಲಾಗುವುದು. ಕರ್ನಾಟಕ ಅಪ್ರೆಂಟಿಷಿಪ್ ಯೋಜನೆಯಡಿ 50,000 ವಿದ್ಯಾರ್ಥಿಗಳಿಗೆ ಅಪ್ರೆಂಟಿಷಿಪ್ ತರಬೇತಿಯನ್ನು ನೀಡಲಾಗುವುದು. ಉದ್ಯೋಗ ಮೇಳ ಮತ್ತು ಉದ್ಯೋಗ ವಿನಿಮಯ ಕೇಂದ್ರಗಳಿಂದ 1,00,000 ಜನರಿಗೆ ಉದ್ಯೋಗ ನಿಯುಕ್ತಿ ಮತ್ತು 25,000 ಜನರಿಗೆ ಉದ್ಯಮಶೀಲತಾ ತರಬೇತಿಯನ್ನು ನೀಡಲಾಗುವುದು. ಮುಂದಿನ ವರ್ಷಗಳಲ್ಲಿ ಈ ಗುರಿಗಳು ದ್ವಿಗುಣಗೊಳ್ಳಲಿವೆ.

ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಶೇಕಡ 20 ರಷ್ಟು ಪರಿಶಿಷ್ಟಜಾತಿ, ಶೇಕಡ 7 ರಷ್ಟು ಪರಿಶಿಷ್ಟ ಪಂಗಡ ಮತ್ತು ಶೇಕಡ 15 ರಷ್ಟು ಅಲ್ಪಸಂಖ್ಯಾತ ಯುವಜನರಿಗೆ ತರಬೇತಿಯನ್ನು ನೀಡಲಾಗುವುದು. ಅಲ್ಲದೆ ಶೇಕಡ 33 ರಷ್ಟು ಮಹಿಳೆಯರಿಗೆ ಮತ್ತು ಶೇಕಡ 3 ರಷ್ಟು ವಿಶೇಷ ಚೇತನರಿಗೆ ತರಬೇತಿಯನ್ನು ನೀಡಲಾಗುವುದು. 2016-17 ನೇ ಸಾಲಿನಲ್ಲಿ 1,61,000 ಯುವಕರಿಗೆ ಕೌಶಲ್ಯಾಭಿವೃದ್ಧಿ ತರಬೇತಿ, 8,900 ಜನರಿಗೆ ಶಿಶಿಕ್ಷು ತರಬೇತಿ, 49,000 ಜನರಿಗೆ ಜೀವನೋಪಾಯ ತರಬೇತಿ, ಉದ್ಯೋಗ ಮೇಳ ಮತ್ತು ಉದ್ಯೋಗ ವಿನಿಮಯ ಕೇಂದ್ರಗಳಿಂದ 75,000 ಜನರಿಗೆ ಉದ್ಯೋಗ ನಿಯುಕ್ತಿ ಮತ್ತು 4,500 ಜನರಿಗೆ ಉದ್ಯಮಶೀಲತಾ ತರಬೇತಿಯನ್ನು ನೀಡಲಾಗಿದೆ.

ಇದಕ್ಕೆ ಪೂರಕವಾಗಿ ಕೌಶಲ್ಯ ವಿಶ್ವವಿದ್ಯಾಲಯ, ಪ್ರಾವೀಣ್ಯತಾ ಕೇಂದ್ರಗಳು, ವೃತ್ತಿ ಮಾರ್ಗದರ್ಶನ, ಸಲಹೆ ಮತ್ತು ಉದ್ಯೋಗ ನಿಯುಕ್ತಿ ಸೇವಾಕೇಂದ್ರಗಳು, ವಿದೇಶಿ ಉದ್ಯೋಗ ಕೋಶ ಮುಂತಾದವುಗಳನ್ನು ಸ್ಥಾಪಿಸಲಾಗುವುದು. ಉದ್ಯೋಗಾಸಕ್ತ ಯುವಜನರಿಗೆ, ಪೋಷಕರಿಗೆ, ಶೈಕ್ಷಣಿಕ ಸಂಸ್ಧೆಗಳಿಗೆ, ವೃತ್ತಿ ತರಬೇತಿ ಸಂಸ್ಥೆಗಳಿಗೆ, ಉದ್ದಿಮೆದಾರರಿಗೆ ನಿರಂತರ ಮಾಹಿತಿಯನ್ನು ಒದಗಿಸಲು ವೆಬ್ ಸೈಟ್, ವೆಬ್ ಪೋರ್ಟಲ್ ಅಭಿವೃದ್ಧಿ ಪಡಿಸಲಾಗಿದೆ ಮತ್ತು ಕೌಶಲ್ಯ ಕರ್ನಾಟಕ ಮಾಸಪತ್ರಿಕೆಯನ್ನು ಹೊರಡಿಸಲಾಗಿದೆ. ರಾಜ್ಯ ಕೌಶಲ್ಯನೀತಿಯನ್ನು ರೂಪಿಸಲಾಗಿದ್ದು, ಇಷ್ಟರಲ್ಲೇ ಈ ಕೌಶಲ್ಯ ನೀತಿಯನ್ನು ಪ್ರಕಟಿಸಿ ನೀತಿಯಲ್ಲಿನ ಅಂಶಗಳ ಅನುಷ್ಠಾನವನ್ನು ಕೈಗೊಳ್ಳಲಾಗವುದು. ಇದಲ್ಲದೆ ಉದ್ಯಮಶೀಲತೆ ಮತ್ತು ಜೀವನೋಪಾಯ ಕುರಿತು ನೀತಿಯನ್ನು ಪ್ರಕಟಿಸಲಾಗುವುದು.

ರಾಜ್ಯದಲ್ಲಿ ಪ್ರಸ್ತುತ ಶೇಕಡ 80.64ರಷ್ಟು ಮಕ್ಕಳು ಮಾತ್ರ 10 ವರ್ಷಗಳ ಶಾಲಾ ಶಿಕ್ಷಣವನ್ನು ಪೂರೈಸುತ್ತಿದ್ದಾರೆ. 2025ರ ವೇಳೆಗೆ ರಾಜ್ಯದ ಶೇಕಡ 100 ರಷ್ಟು ಮಕ್ಕಳು ಶಾಲಾ ಶಿಕ್ಷಣವನ್ನು ಪೂರೈಸುವಂತೆ ಸರ್ಕಾರವು ಯೋಜನೆಯನ್ನು ರೂಪಿಸುತ್ತಿದೆ. ರಾಜ್ಯದಲ್ಲಿ ಪ್ರಸ್ತುತ ಔಪಚಾರಿಕ ವೃತ್ತಿ ತರಬೇತಿಯನ್ನು ಪಡೆಯುವ ಮಕ್ಕಳ ಅನುಪಾತ ಶೇಕಡ 14.62 ರಷ್ಟಿದ್ದು, ಈಗಿರುವ ತರಬೇತಿ ಮೂಲಸೌಕರ್ಯಗಳ ಸಾಮರ್ಥ್ಯವನ್ನು ಸಂಪೂರ್ಣವಾಗಿ ಉಪಯೋಗಿಸಿಕೊಂಡು ಈ ಅನುಪಾತವನ್ನು ಕನಿಷ್ಠ ಶೇಕಡ 60ಕ್ಕೆ ಹೆಚ್ಚಿಸಲಾಗುವುದು.

ಉನ್ನತ ಶಿಕ್ಷಣದಲ್ಲಿ ಈಗಿನ ಒಟ್ಟು ದಾಖಲಾತಿಯ ಪ್ರಮಾಣ ಶೇಕಡ 29 ರಷ್ಟಿದ್ದು ಈ ವಲಯದಲ್ಲಿ ಸಾಮರ್ಥ್ಯವನ್ನು ಹೆಚ್ಚಿಸಿ 2030ರ ವೇಳೆಗೆ ದಾಖಲಾತಿ ಪ್ರಮಾಣವನ್ನು ಶೇಕಡ 70ಕ್ಕೆ ಹೆಚ್ಚಿಸುವ ಕ್ರಮವನ್ನು ಕೈಗೊಳ್ಳಲಾಗುವುದು. ಯಾವ ಮಕ್ಕಳಿಗೆ ಔಪಚಾರಿಕ ವೃತ್ತಿ ಶಿಕ್ಷಣ ಅಥವಾ ಉನ್ನತ ಶಿಕ್ಷಣವನ್ನು ಉಚಿತವಾಗಿ ಪಡೆಯಲು ಸಾಧ್ಯವಾಗುವುದಿಲ್ಲವೋ ಅಂತಹ ರಾಜ್ಯದ ಎಲ್ಲಾ ಮಕ್ಕಳಿಗೆ 3 ರಿಂದ 6 ತಿಂಗಳ ಅವಧಿಯ ಉಚಿತ ವೃತ್ತಿ ಶಿಕ್ಷಣ ಮತ್ತು ತರಬೇತಿಯನ್ನು ನೀಡಲು ಸಾಕಷ್ಟು ಅವಕಾಶಗಳನ್ನು ಕಲ್ಪಿಸಲಾಗುವುದು.

ಉನ್ನತ ಶಿಕ್ಷಣದಲ್ಲಿ ಈಗಿನ ಒಟ್ಟು ದಾಖಲಾತಿಯ ಪ್ರಮಾಣ ಶೇಕಡ 29 ರಷ್ಟಿದ್ದು ಈ ವಲಯದಲ್ಲಿ ಸಾಮರ್ಥ್ಯವನ್ನು ಹೆಚ್ಚಿಸಿ 2030ರ ವೇಳೆಗೆ ದಾಖಲಾತಿ ಪ್ರಮಾಣವನ್ನು ಶೇಕಡ 70ಕ್ಕೆ ಹೆಚ್ಚಿಸುವ ಕ್ರಮವನ್ನು ಕೈಗೊಳ್ಳಲಾಗುವುದು. ಯಾವ ಮಕ್ಕಳಿಗೆ ಔಪಚಾರಿಕ ವೃತ್ತಿ ಶಿಕ್ಷಣ ಅಥವಾ ಉನ್ನತ ಶಿಕ್ಷಣವನ್ನು ಉಚಿತವಾಗಿ ಪಡೆಯಲು ಸಾಧ್ಯವಾಗುವುದಿಲ್ಲವೋ ಅಂತಹ ರಾಜ್ಯದ ಎಲ್ಲಾ ಮಕ್ಕಳಿಗೆ 3 ರಿಂದ 6 ತಿಂಗಳ ಅವಧಿಯ ಉಚಿತ ವೃತ್ತಿ ಶಿಕ್ಷಣ ಮತ್ತು ತರಬೇತಿಯನ್ನು ನೀಡಲು ಸಾಕಷ್ಟು ಅವಕಾಶಗಳನ್ನು ಕಲ್ಪಿಸಲಾಗುವುದು.

ಈಗಾಗಲೇ ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಯ ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗಿದ್ದು, ಎಲ್ಲಾ ಇಲಾಖೆಗಳು ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಈ ಮಾರ್ಗಸೂಚಿಯ ಅನ್ವಯವೇ ಅನುಷ್ಠಾನಗೊಳಿಸಲು ತಿಳಿಸಲಾಗಿದೆ. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಚಟುವಟಿಕೆಗಳ ಅನುಷ್ಠಾನ ಮತ್ತು ಉಸ್ತುವಾರಿಯನ್ನು ಕೈಗೊಳ್ಳಲು ರಾಜ್ಯ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಕೌಶಲ್ಯ ಮಿಷನ್ಗಳನ್ನು ರಚಿಸಲಾಗಿದೆ. ಜಿಲ್ಲಾವಾರು ಗುರಿಗಳನ್ನು ನಿಗದಿಪಡಿಸಿ ಅನುಷ್ಠಾನ ಕಾರ್ಯಕ್ಕೆ ಚಾಲನೆಯನ್ನು ನೀಡಲಾಗಿದೆ.

ಮುಂದಿನ ಹಂತದಲ್ಲಿ ಉನ್ನತ ಗುಣಮಟ್ಟದ ತರಬೇತಿ ಸಂಸ್ಥೆಗಳನ್ನು ಆಯ್ಕೆಮಾಡಿ, ಬೇಡಿಕೆ ಸಮೀಕ್ಷೆಯಲ್ಲಿ ನೋಂದಾಯಿಸಿದ ಯುವಕ-ಯುವತಿಯರಿಗೆ ತರಬೇತಿಯನ್ನು ನೀಡಲಾಗುವುದು.

ನಮ್ಮ ಸರ್ಕಾರದ ಈ ಜನಪ್ರಿಯ ಕಾರ್ಯಕ್ರಮಗಳ ಮೂಲಕ ನಾಡಿನ ಜನತೆ ಉನ್ನತ ಮಟ್ಟದ ಕೌಶಲ್ಯಗಳನ್ನು ಹೊಂದಿ ಸ್ವಯಂ ಉದ್ಯೋಗ ಅಥವಾ ವಿವಿಧ ಉದ್ಯಮಗಳಲ್ಲಿ ಉದ್ಯೋಗವನ್ನು ಪಡೆದು ತಮ್ಮ ಆರ್ಥಿಕ ಮಟ್ಟವನ್ನು ಉತ್ತಮಪಡಿಸಿಕೊಳ್ಳಲು ತನ್ಮೂಲಕ ರಾಜ್ಯದ ಆರ್ಥಿಕತೆ ಉತ್ತಮಗೊಳಿಸಲು ಪೂರಕ ವಾತಾವರಣ ಸೃಷ್ಟಿಯಾಗಲಿ ಮತ್ತು ಉತ್ತಮ ಜೀವನವನ್ನು ಎಲ್ಲರೂ ರೂಪಿಸಿಕೊಳ್ಳಲಿ ಎಂಬುದೇ ನನ್ನ ಆಶಯವಾಗಿದೆ.